ರೇವ ಶಿಲಾಸ್ತರಶ್ರೇಣಿಗಳು
ಭಾರತದ ಮಧ್ಯಪ್ರದೇಶದ ರೇವ ಪ್ರದೇಶದಲ್ಲಿ ಮಾತ್ರವಲ್ಲದೆ ಇನ್ನೂ ಹಲವೆಡೆಗಳಲ್ಲೂ ಕಂಡುಬರುವ, 360 ಕೋಟಿ ವರ್ಷಗಳಿಂದ 10 ಸಾವಿರ ವರ್ಷಗಳ ನಡುವಣ ಅವಧಿಯಲ್ಲಿ ರೂಪುಗೊಂಡ ಜಲಜಶಿಲಾಸ್ತರ ಶ್ರೇಣಿಗಳು. 165-64 ಕೋಟಿ ವರ್ಷ ಪ್ರಾಚೀನದ, ಇಂಥ ಕಿರಿಯ ಪ್ರೀಕೇಂಬ್ರಿಯನ್ ಅಥವಾ ಪ್ರೋಟಿರೋeóÉೂೀಯಿಕ್ ಶಿಲಾಸ್ತರಗಳು ಮಧ್ಯಭಾರತದ ವಿಂಧ್ಯನ್ ಗುಡ್ಡಗಾಡು ಪ್ರದೇಶ, ಸೋನ್ ನದೀಕಣಿವೆ ಪ್ರದೇಶಗಳು ಮತ್ತು ರೇವ ಎಂಬ ಸ್ಥಳದ ಸುತ್ತಮುತ್ತ ಕಾಣಸಿಗುತ್ತವೆ. ಇವು ಆ ಕಾಲದ ಸಮುದ್ರದಲ್ಲಿ ಶೇಖರಗೊಂಡು ಮೇಲಣಸ್ತರಗಳ ಒತ್ತಡದಿಂದ ಜಲಜಶಿಲಾಶ್ರೇಣಿಗಳಾಗಿ ಮಾರ್ಪಾಡಾದುವು. ಭೂಎತ್ತುವಿಕೆಯಿಂದ ಸ್ತರಗಳು ಹೊರಬಂದು, ಶಿಲಾಶಿಥಿಲೀಕರಣಕ್ಕೆ ಒಳಪಟ್ಟು ಶಿಲಾಸ್ತರ ಶ್ರೇಣಿಯ ರೂಪವನ್ನು ಪಡೆದಿವೆ. ಇವು ವಿಂಧ್ಯಾಚಲದ ಸುತ್ತಮುತ್ತಲಿನ ಬುಂದೇಲ್‍ಖಂಡ್, ಮಾಳವ, ದೆಹರಿ-ಅನ್-ಸೋಸ್‍ನಿಂದ ಹೋಷಂಗಾ ಬಾದ್‍ವರೆಗೂ ಚಿತ್ತೋಡಘಡದಿಂದ ಆಗ್ರ ಮತ್ತು ಗ್ವಾಲಿಯರ್ ಪ್ರದೇಶ ಗಳವರೆಗೂ ವ್ಯಾಪಿಸಿಕೊಂಡಿವೆ. 
ರೇವ ಮರಳುಶಿಲಾಸ್ತರಗಳಲ್ಲಿ ಅನೇಕ ರೀತಿಯ ಸ್ತರಸಂಚಯನ ವಿನ್ಯಾಸಗಳಿವೆ ಇವುಗಳಲ್ಲಿ ಪ್ರಮುಖವಾಗಿ ಅಡ್ಡಸ್ತರವಿನ್ಯಾಸ (ಕ್ರಾಸ್ ಲ್ಯಾಮಿನೇಷನ್) ಕಾಣಿಸುತ್ತದೆ. ರೇವ ಸ್ತರಗಳನ್ನೊಳಗೂಂಡ ಮೇಲಣ ವಿಂಧ್ಯನ್ ಶಿಲಾವರ್ಗದಲ್ಲಿ ಕೈಮೂರ್, ರೇವ ಮತ್ತು ಭಂದರ್ ಶಿಲಾಶ್ರೇಣಿಗಳಿದ್ದು ಅವುಗಳ ನಡುವೆ ಕಾಲಮಿತಿ ಅನನುರೂಪ ಸಂಪರ್ಕಗಳಿವೆ. ವಜ್ರರ್ಯ ವೆಂಟಿಶಿಲೆಗಳು ಈ ಸಂಪರ್ಕಸ್ಥಾನದಲ್ಲಿ ಸಂಚಯನಗೊಂಡು ಶಿಲಾಶ್ರೇಣಿಗಳನ್ನು ಬೇರ್ಪಡಿಸುತ್ತವೆ.

ಬುಂದೇಲ್‍ಖಂಡದ ಕೆಳಗಣ ರೇವ ಮರಳುಶಿಲೆ ಮತ್ತು ಪನ್ನಾ ಜೇಡುಶಿಲೆಗಳ ಇರುವಿಕೆಯನ್ನು ವ್ರೆಡನ್‍ಬರ್ಗ್ ಎಂಬ ಭೂವಿಜ್ಞಾನಿ ಪ್ರಶ್ನಿಸಿದ್ದಾನೆ. ವಜ್ರಯಕ್ತ ವೆಂಟಿಶಿಲೆಯು ಜಿರಿಜೇಡುಶಿಲೆಯ ತಳಭಾಗದಲ್ಲಿ ಇರುತ್ತದೆ ಎಂಬುದು ಆತನ ಅಭಿಪ್ರಾಯ.

ವಿಂಧ್ಯನ್ ಬೃಹತ್ ಶಿಲಾವರ್ಗದ ರೇವ ಶಿಲಾಸ್ತರಶ್ರೇಣಿಯನ್ನು ದಕ್ಷಿಣ ಭಾರತದ ಕರ್ನೂಲ್ ಮತ್ತು ಕಡಪ ಶಿಲಾಸಮುದಾಯದೊಂದಿ ಗೂ ಉತ್ತರ ಕರ್ನಾಟಕದ ಬಿಜಾಪುರ ಮತ್ತು ಬೆಳಗಾಂವಿ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಕಲಾದಗಿ ಭೀಮಾ ಮತ್ತು ಬಾದಾಮಿ ಶಿಲಾ ಸಮುದಾಯದೊಂದಿಗೂ ಹೋಲಿಸಿದೆ. ಅವುಗಳಲ್ಲಿಯ ಸ್ತರಸಂಯೋಜನೆ, ಸ್ತರವಿನ್ಯಾಸ ಮತ್ತು ಜೀವ್ಯವಶೇಷಗಳ ಆಧಾರ ಹಾಗೂ ಭೂರಾಸಾಯನಿಕ ಮತ್ತು ಸಮಸ್ಥಾನಿ ವಿಧಾನಗಳನ್ನು ಅನುಸರಿಸಿ ವಿಶ್ಲೇಷಣೆ ಮಾಡಿ ಅವೂ ಸಮಕಾಲೀನವೆಂದು ಪರಿಗಣಿಸಲಾಗಿದೆ.

ರೇವ ಶಿಲಾಸ್ತರಶ್ರೇಣಿಗಳಿಗೆ ಆರ್ಥಿಕ ಪ್ರಾಮುಖ್ಯ ಉಂಟು. ಈ ಸ್ತರಗಳ ಕೆಳ ಮತ್ತು ಮೇಲಿನ ಭಾಗಗಳಲ್ಲಿ ಶೇಖರಗೊಂಡಿರುವ ಪೆಂಟೆಶಿಲೆಗಳಲ್ಲಿ ವಜ್ರದ ಹರಳುಗಳು ಕಾಣಸಿಗುತ್ತವೆ. ಎಂದೇ ಇವುಗಳಿಗೆ ವಜ್ರಯುಕ್ತ ಪೆಂಟಿಶಿಲೆಗಳೆಂದು ಹೆಸರಿಸಲಾಗಿದೆ. ಈ ಶಿಲೆಗಳ ಶಿಥಿಲೀಕರಣದಿಂದ ವಜ್ರದ ಸಣ್ಣ ಸಣ್ಣ ಹರಳುಗಳು ಬೇರ್ಪಟ್ಟು ಮರಳು ಮತ್ತು ಮಣ್ಣಿನೊಂದಿಗೆ ಸೇರಿಕೊಂಡಿರುತ್ತವೆ. ರೇವ ಶಿಲಾಶ್ರೇಣಿಯ ಕೆಳಗಣ ಮತ್ತು ಮೇಲಣ ಸ್ತರಗಳಾದ ಸೆಂಮ್ರಿ ಮತ್ತು ಭಂದರ್ ಸುಣ್ಣಶಿಲೆಗಳು ಹಾಗೂ ರೇವ ಮರಳುಶಿಲೆಗಳು ವಿವಿಧ ಕಟ್ಟಡ ನಿರ್ಮಾಣ ಕಾರ್ಯಗಳಿಗೂ ಉಪಯುಕ್ತವೆನಿಸಿವೆ.   
 (ಎಸ್.ಎಸ್.ಎ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ